ನಾರುಸಿರು

Halitosis

ಬಾಯಿಯಿಂದ ಹೊರಹೊಮ್ಮುವ ಕೆಟ್ಟ ವಾಸನಗೆ ನಾರುಸಿರು ಅಥವಾ ದುರ್ಗಂಧಶ್ವಾಸ (ಹಾಲಿಟೋಸಿಸ್) ಎನ್ನುತ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಶೇಕಡಾ ತೊಂಬತ್ತರಷ್ಟು ಕಾರಣಗಳ ಮೂಲ ಬಾಯಿಯಲ್ಲಿ ಇರುತ್ತದೆ. ಇನ್ನುಳಿದ ಶೇಕಡಾ ಹತ್ತರಷ್ಟು ಕಾರಣಗಳು ಗಂಟಲು, ಶ್ವಾಸಕೋಶ. ಜಠರ ಹೀಗೆ ದೇಹದ ವಿವಿಧ ಭಾಗಗಳ ಖಾಯಿಲೆಗಳಿಂದ ಬರಬಹುದು.

ನಾರುಸಿರಿಗೆ ಕಾರಣಗಳು

  • ನಾವು ತಿನ್ನುವ ಆಹಾರದಲ್ಲಿರುವ ಸಕ್ಕರೆಯು ಹಲ್ಲುಗಳ ನಡುವೆ ಸಂದಿಗಳಲ್ಲಿ ಶೇಖರಗೊಳ್ಳುತ್ತದೆ. ಆಮ್ಲಗಳು ಮತ್ತು ಸೂಕ್ಷ್ಮಾಣು ಜೀವಿಗಳು ಇದರ ಮೇಲೆ ದಾಳಿ ಇಡುವ ಪರಿಣಾಮ, ಆಹಾರದ ಕೊಳೆಯುವಿಕೆ ಆರಂಭವಾಗುತ್ತದೆ. ಇದರಿಂದಾಗಿ ಬಾಯಿಯಲ್ಲಿ ದುರ್ವಾಸನೆ ಶುರುವಾಗುತ್ತದೆ.
  • ಬಾಯಿಯಲ್ಲಿ ಸಿಕ್ಕಿಕೊಂಡ ಆಹಾರದ ಪರಿಣಾಮವಾಗಿ ಉಂಟಾದ ಆಮ್ಲಗಳು ಮತ್ತು ಸೂಕ್ಷ್ಮಾಣು ಜೀವಿಗಳು ನಿಧಾನವಾಗಿ ಹಲ್ಲಿನ ಹೊರಕವಚ ಎನಾಮೆಲ್ ಮೇಲೆ ದಾಳಿ ಇಡುತ್ತವೆ ನಂತರ ತಿರುಳಿಗೂ ವ್ಯಾಪಿಸುತ್ತವೆ. ಇದರಿಂದ ಹಲ್ಲಿನಲ್ಲಿ ದಂತಕುಳಿ ಉಂಟಾಗುತ್ತದೆ. ಈ ದಂತಕುಳಿಯಲ್ಲಿ ಆಹಾರ ಸಿಕ್ಕಿಕೊಂಡು ಮತ್ತೆ ಕೆಟ್ಟ ವಾಸನೆಗೆ ಕಾರಣವಾಗುತ್ತದೆ.
  • ಆಹಾರ ಕೊಳೆಯುವಿಕೆ ದಂತಗಳಿಗಷ್ಟೇ ಅಲ್ಲದೇ ವಸಡುಗಳಿಗೂ ಹಾನಿಯುಂಟುಮಡುತ್ತದೆ. ವಸಡಿನ ಸೋಂಕಿನ ಪರಿಣಾಮವಾಗಿ ವಸಡಿನ ಊತ, ರಕ್ತ ಬರುವುದು ಆರಂಭವಾಗುತ್ತದೆ. ಇದರೊಂದಿಗೆ ಬಾಯಿಯಲ್ಲಿ ದುರ್ವಸನೆ ಕೂಡ ಆರಂಭವಾಗುತ್ತದೆ.
  • ಬಾಯಿ ಮತ್ತು ಹಲ್ಲುಗಳಷ್ಟೇ ಅಲ್ಲದೇ ಕೊಳಕು ನಾಲಗೆಯೂ ವಾಸನೆಗೆ ಕಾರಣವಾಗಬಹುದು.
  • ನೈಸರ್ಗಿಕವಾಗಿಯೆ ಬಾಯಿಯಲ್ಲಿ ಜೊಲ್ಲುರಸ ಕಡಿಮೆಯಾದಾಗಲೂ ಬಾಯಿಯಿಂದ ಕೆಟ್ಟ ವಾಸನೆ ಬರಬಹುದು. ಇದನ್ನು ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ, ಜ್ವರ ಬಂದಾಗ ಹಾಗೂ ವೃದ್ಧರಲ್ಲಿ ಕಾಣಬಹುದು.
  • ಪ್ರಬಲವಾದ ವಾಸನೆಯುಳ್ಳ ಬೆಳ್ಳುಳ್ಳಿ, ಈರುಳ್ಳಿಯಂಥ ಪದಾರ್ಥಗಳು ಮತ್ತು ಮದ್ಯ, ಬೀಡಿ, ಸಿಗರೇಟು ಇವು ಬಾಯಿಯಿಂದ ಬರುವ ಘಾಟಾದ ವಸನೆಗೆ ಕಾರಣ.
  • ಬಾಯಿಯ ದುರ್ವಾಸನೆಗೆ ಮತ್ತೊಂದು ಸಾಮಾನ್ಯ ಕಾರಣ ಬಾಯಿಯಲ್ಲಿ ಉಸಿರಾಡುವುದು. ಈ ಅಭ್ಯಾಸ ವಸಡು ಮತ್ತು ಹಲ್ಲುಗಳನ್ನು ಜೊಲ್ಲುರಸ ತೊಳೆಯದಂತೆ ತಡೆಯುತ್ತದೆ. ಹೀಗಾಗಿ ಸೂಕ್ಷ್ಮಾಣು ಜೀವಿಗಳು ಆಹಾರ ಕಣಗಳು, ಹಾಗೆಯೇ ಉಳಿದು ಕೆಟ್ಟ ವಾಸನೆ ಹೊರಹೊಮ್ಮುತ್ತದೆ.
  • ಹಲ್ಲಿನ ಓರೆಕೋರೆ ಸರಿಪಡಿಸುವ ತಂತಿ ಚಿಕಿತ್ಸೆ ಪಡೆಯುವಾಗ, ಹಲ್ಲು ಕೀಳಿಸಿದಾಗ, ಕೃತಕ ದಂತಪಂಕ್ತಿಗಳನ್ನು ಉಪಯೋಗಿಸುವಾಗ ಬಾಯಿಯ ನೈರ್ಮಲ್ಯಕ್ಕೆ ಇನ್ನೂ ಹೆಚ್ಚಿನ ಗಮನ ನೀಡುವುದು ಅಗತ್ಯ. ಏಕೆಂದರೆ ಮೇಲಿನ ಸಂದರ್ಭಗಳಲ್ಲಿ ಶೇಖರಣೆಯಾಗುವ ಸಾಧ್ಯತೆಗಳಿವೆ.
  • ಕೆಲವು ರೀತಿಯ ವಿಶಿಷ್ಟ ಬಾಯಿ ವಾಸನೆಗಳು ಆಯಾ ರೋಗದಲ್ಲಿ ಮಾತ್ರ ಕಂಡುಬರುತ್ತವೆ. ಉದಾಹರಣೆಗೆ, ಮಧುಮೇಹ ರೋಗಿಗಳಲ್ಲಿ ಸಿಹಿ ವಾಸನೆ, ಪಿತ್ತಕೋಶ ವೈಫಲ್ಯದಲ್ಲಿ ಹೊಸ ಕಳೇಬರದ ವಾಸನೆ, ಶ್ವಾಸಕೋಶದಲ್ಲಿ ಹುಣ್ಣಿದಲ್ಲಿ, ಕೊಳೆತ ಮಾಂಸದ ವಾಸನೆ ಇತ್ಯಾದಿ.
  • ಕೆಲವೊಮ್ಮೆ ಮಾನಸಿಕ ಖಾಯಿಲೆಗಳಿಂದಾಗಿ ರೋಗಿಯು ಬಾಯಿಯಿಂದ ವಾಸನೆ ಬರುತ್ತಿರುವುದಾಗಿ ಕಲ್ಪಿಸಿಕೊಳ್ಳುತ್ತಾನೆ.

ಪರಿಹಾರ/ಚಿಕಿತ್ಸೆ

  • ಬಾಯಿಯಿಂದಲೇ ಉಂಟಾಗುವ ವಾಸನೆಯನ್ನು ಹೋಗಲಾಡಿಸಲು ಸ್ವಚ್ಛತೆಯ ಕಡೆಗೆ ಗಮನ ಕೊಡಬೇಕು. ದಿನಕ್ಕೆರಡು ಬಾರಿ ಎದ್ದ ತಕ್ಷಣ ಹಗೂ ಮಲಗುವ ಮುನ್ನ ಹಲ್ಲುಗಳನ್ನು ಉಜ್ಜಿ, ವಸಡುಗಳನ್ನು ಬೆರಳುಗಳಿಂದ ತಿಕ್ಕಿ , ನಾಲಗೆಯನ್ನು ಚೊಕ್ಕಗೊಳಿಸಬೇಕು. ಜೊತೆಗೆ ಮಧ್ಯೆ ಆಹಾರ ತಿಂದಾಗಲೆಲ್ಲಾ ಬಾಯಿಯನ್ನು ಸ್ವಚ್ಛವಾದ ನೀರಿನಿಂದ ಮುಕ್ಕಳಿಸಬೇಕು.

  • Smileface
  • ವೃದ್ಧರಲ್ಲಿ ಜೊಲ್ಲುರಸ ಕಡಿಮೆಯಾಗಿ ದುರ್ವಾಸನೆ ಆರಂಭವಾಗಿದ್ದರೆ, ಸಕ್ಕರೆ ರಹಿತ ಚೂಯಿಂಗ್ ಗಮ್ ಅಥವಾ ಪೆಪ್ಪರ್ ಮೆಂಟನ್ನು ಅಗಿಯಬಹುದು.
  • ಬಾಯಿಯಿಂದ ಉಸಿರಾಡುವುದನ್ನು ನಿಲ್ಲಿಸಿ ಮೂಗಿನಿಂದ ಉಸಿರಾಡುವುದು. ಮಕ್ಕಳು ಟಾನ್ಸಿಲ್, ಅಡೆನಾಯ್ಡ್, ಇತರೆ ತೊಂದರೆಗಳಿಂದ ಬಾಯಿಯಲ್ಲಿ ಉಸಿರಾಡುತ್ತಿದ್ದರೆ, ಸೂಕ್ತ ಚಿಕಿತ್ಸೆ ಕೊಡಿಸಬೇಕು.
  • ಘಾಟಾದ ಆಹಾರ ಪದಾರ್ಥಗಳನ್ನು ಕಡಿಮೆ ತಿನ್ನುವುದು ಹಾಗೂ ಕುಡಿತ, ಸಿಗರೇಟ್, ಬೀಡಿ ಮುಂತಾದ ಕೆಟ್ಟ ಚಟಗಳಿಂದ ದೂರ ಇರುವುದು.
  • ಕೆಲವು ಗಂಟೆಗಳ ತಾತ್ಕಾಲಿಕ ಪರಿಹಾರವಾಗಿ ಮೌತ್ ವಾಷ್ ಗಳನ್ನು ಬಳಸಬಹುದು.
  • ದಂತವೈದ್ಯರನ್ನು ನಿಯಮಿತವಾಗಿ ಕನಿಷ್ಠ ಆರು ತಿಂಗಳಿಗೊಮ್ಮೆ ಭೇಟಿಯಾಗಿ ಹಲ್ಲು ಸ್ವಚ್ಛ ಮಾಡಿಸಿಕೊಳ್ಳುವುದು, ದಂತ ಕುಳಿ ತುಂಬಿಸುವುದು ಮುಂತಾದ ಚಿಕಿತ್ಸೆಯನ್ನು ಪಡೆಯಬೇಕು.

ಹೀಗೆ ಸರಿಯಾದ ಜೀವನ ಶೈಲಿ, ನಿಯಮಿತವಾಗಿ ಹಲ್ಲುಜ್ಜುವಿಕೆ, ಸರಿಯಾದ ವೇಳೆಗೆ ದಂತ ವೈದ್ಯರ ಭೇಟಿ ಮತ್ತು ಚಿಕಿತ್ಸೆ, ಈ ತ್ರಿಸೂತ್ರಗಳನ್ನು ಪಾಲಿಸಿದರೆ ಬಾಯಿ ಮತ್ತು ಹಲ್ಲುಗಳು ಸ್ವಚ್ಛವಾಗಿ, ಶುಭ್ರವಾಗಿದ್ದು, ಎಲ್ಲರೊಂದಿಗೆ ಬೆರೆಯಲು ಅನುಕೂಲ ಉಂಟು ಮಾಡಿಕೊಡುತ್ತದೆ.

Smileface